ಕಾನೂನು ಸುದ್ದಿ

ಅಕ್ರಮ ಆಸ್ತಿಗಳಿಕೆ: ಬೆಸ್ಕಾಂ ಅಧಿಕಾರಿಗೆ 3 ವರ್ಷ ಜೈಲು ಶಿಕ್ಷೆ, 1 ಕೋಟಿ ದಂಡ ವಿಧಿಸಿದ ಕೋಟ್೯

Share It

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಮಾಡಿರುವ ಪ್ರಕರಣದಲ್ಲಿ ಸರಕಾರಿ ಅಧಿಕಾರಿಯೊಬ್ಬರನ್ನು ಅಪರಾಧಿ ಎಂದು ಪರಿಗಣಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ 3 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ಒಂದು ಕೋಟಿ ರುಪಾಯಿ ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ.

ಸಿ.ರಾಮಲಿಂಗಯ್ಯ ಎಂಬುವರು ಜೈಲು ಶಿಕ್ಷೆಗೆ ಒಳಗಾದವರು. ಇವರು 2011ರಲ್ಲಿ ಬೆಂಗಳೂರು ವಿದ್ಯುತ್ ಕಂಪೆನಿ (ಬೆಸ್ಕಾಂ) ಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದರು. ಆ ಸಮಯದಲ್ಲಿ ಲೋಕಾಯುಕ್ತ ಪೊಲೀಸರು ಇವರ ಮನೆ ಮೇಲೆ ದಾಳಿ ಮಾಡಿದ್ದರು. ಆಗ ಅಪಾರ ಪ್ರಮಾಣದ ಅಸ್ತಿ, ದಾಖಲೆ ಪತ್ರಗಳು ಪತ್ತೆಯಾಗಿತ್ತು.

ಅದರಂತೆ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ-1988ರಡಿ ಪ್ರಕರಣ ದಾಖಲಿಸಿಕೊಂಡು ಸಿ.ರಾಮಲಿಂಗಯ್ಯ ಅವರನ್ನು ಬಂಧಿಸಲಾಗಿತ್ತು. ತನಿಖೆಯಲ್ಲಿ ಆದಾಯಕ್ಕಿಂತ 1.03 ಕೋಟಿ ಅಂದರೆ ಶೇ. 44.6ರಷ್ಟು ಅಕ್ರಮ ಆಸ್ತಿ ಹೊಂದಿರುವುದು ದೃಢಪಟ್ಟಿತ್ತು.

ಆಗಿನ ಡಿವೈಎಸ್ ಪಿಗಳಾದ ಅಬ್ದುಲ್ ಅಹದ್, ಡಾ.ಅಶ್ವಿನಿ ಹಾಗೂ ಎಂ.ನಾರಾಯಣ್ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಂ.ರಾಧಾಕೃಷ್ಣ ತೀರ್ಪು ನೀಡಿದ್ದಾರೆ. ಅಪರಾಧಿ 1 ಕೋಟಿ ದಂಡ ಪಾವತಿಸಲು ಸಾಧ್ಯವಾಗದಿದ್ದಲ್ಲಿ 4 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಿದ್ದಾರೆ.


Share It

You cannot copy content of this page