ಕಾನೂನು

ವಕೀಲರು ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿ: ಹೈಕೋರ್ಟ್ ನ್ಯಾ.ಎಂ.ಜಿ.ಶುಕುರೆ ಕಮಾಲ್

Share It

ಕೊಪ್ಪಳ: ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರ ಪಾತ್ರವು ಸಹ ಪ್ರಮುಖವಾಗಿದ್ದು, ಜನರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಕೊಪ್ಪಳ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರು ಆಗಿರುವ ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ ಶುಕುರೆ ಕಮಾಲ್ ಅವರು ಹೇಳಿದರು.

ಜಿಲ್ಲಾ ವಕೀಲರ ಸಂಘದಿಂದ ವಕೀಲರ ಸಭಾಂಗಣದಲ್ಲಿ ಜುಲೈ 6 ರಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ವಕೀಲ ವೃತ್ತಿ ಶ್ರೇಷ್ಠ ಸೇವೆಯಾಗಿದ್ದು, ನೊಂದವರಿಗೆ ನ್ಯಾಯ ಒದಗಿಸುವ ಮಹತ್ತರ ಹೊಣೆಗಾರಿಕೆ ನಮ್ಮ ಮೇಲಿದೆ. ನಾವು ನಮ್ಮ ವೃತ್ತಿಯೊಂದಿಗೆ ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ. ಏನು ಸಹಾಯ ಮಾಡಿದ್ದೇವೆ ಅನ್ನುವುದನ್ನು ನೋಡಬೇಕು. ನೊಂದವರಿಗೆ, ಸಂತ್ರಸ್ತರಿಗೆ, ಬಡ ವರ್ಗದರಿಗೆ ನ್ಯಾಯ ಸಿಗುವ ನಿಟ್ಟಿನಲ್ಲಿ ಶ್ರಮಿಸಬೇಕು. ನಿಮ್ಮ ವೃತ್ತಿಯೂ ಸಹ ಒಂದು ಸಮಾಜ ಸೇವೆಯಾಗಿದೆ. ಯಾವುದೇ ಒಂದು ಸಣ್ಣ ಸಮಸ್ಯೆ ಬಂದರೂ ಸಹ ವಕೀಲರು ಅದನ್ನು ಬಗೆಹರಿಸಲು ಸಿದ್ದರಿರಬೇಕು. ನನ್ನಿಂದ ಈ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂಬ ಭಾವನೆ ಬರದಿರಲಿ. ಹಿರಿಯ ವಕೀಲರಿಂದ ಮಾರ್ಗದರ್ಶನ ಪಡೆದು ಮುನ್ನಡೆಯಬೇಕು.

ಲೋಕ್ ಅದಾಲತ್ ಕಾರ್ಯಕ್ರಮಕ್ಕೆ ಅಗತ್ಯ ಸಹಕಾರ ನೀಡಿ, ಪ್ರಕರಣಗಳ ಇತ್ಯರ್ಥಕ್ಕೆ ಕಾನೂನು ಸೇವಾ ಪ್ರಾಧಿಕಾರದೊಂದಿಗೆ ಸಹಕರಿಸಬೇಕು ಎಂದು ಹೇಳಿದರು. ಕೊಪ್ಪಳದಲ್ಲಿ ಹೊಸ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಅನುದಾನ ಹಾಗೂ ವಕೀಲರ ಸಂಘದ ಬೇಡಿಕೆಗಳಿಗೆ ನ್ಯಾಯಾಂಗದ ಪರವಾಗಿ ಏನು ಮಾಡಲು ಸಾಧ್ಯವಿದೆ ಅದಕ್ಕೆ ತಾವು ಪ್ರಯತ್ನಿಸುವುದಾಗಿ ತಿಳಿಸಿದರು.

ಆರೋಗ್ಯ ಕೇಂದ್ರಕ್ಕೆ ಚಾಲನೆ: ಕೊಪ್ಪಳ ಜಿಲ್ಲಾ ನ್ಯಾಯಾಲಯದ ಆವಣದಲ್ಲಿ ಪ್ರಾರಂಭಿಸಲಾದ ಆರೋಗ್ಯ ಕೇಂದ್ರಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ ಶುಕುರೆ ಕಮಾಲ್ ಅವರು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ ನ್ಯಾಯಮೂರ್ತಿಗಳು, ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸಸಿ ನೆಟ್ಟು ಅದಕ್ಕೆ ನೀರುಣಿಸಿದರು. ಬಳಿಕ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕೇಂದ್ರಿಯ ಅಭಿಲೇಖಾಲಯಕ್ಕೆ ಭೇಟಿ ನೀಡಿ, ಅಭಿಲೇಖಾಲಯದಲ್ಲಿನ ಕಡತ ಹಾಗೂ ದಾಖಲೆಗಳ ವೀಕ್ಷಣೆ ಮಾಡಿದರು.


Share It

You cannot copy content of this page