ಕಾನೂನು ಸುದ್ದಿ

ವಿದ್ಯಾರ್ಥಿನಿ ಆತ್ಮಹತ್ಯೆ: ಶಿಕ್ಷಕರ ವಿರುದ್ಧದ ಎಫ್ಐಆರ್ ರದ್ದುಪಡಿಸಲು ಕೋಟ್೯ ನಕಾರ

Share It

ಬೆಂಗಳೂರು: ವಿದ್ಯಾರ್ಥಿನಿಯೊಬ್ಬರ ಘನತೆಗೆ ಧಕ್ಕೆತಂದು ಆತ್ಮಹತ್ಯೆಗೆ ಕಾರಣವಾದರು ಎಂಬ ಆರೋಪ ಹೊತ್ತಿರುವ ಇಬ್ಬರು ಶಿಕ್ಷಕರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ.

ಶಿಸ್ತು, ಸಂಯಮ ಕಲಿಸುವ ಭರದಲ್ಲಿ ವಿದ್ಯಾರ್ಥಿಗಳ ಜೀವಕ್ಕೆ ಹಾನಿಯಾಗುವಂತೆ ಶಿಕ್ಷಕರು ನಡೆದುಕೊಳ್ಳಬಾರದು ಹದಿಹರೆಯದ ವಿದ್ಯಾರ್ಥಿಗಳ ನಡವಳಿಕೆಗಳನ್ನು ವಿಶಾಲ ದೃಷ್ಟಿಕೋನದಿಂದ ಅರ್ಥ ಮಾಡಿಕೊಳ್ಳಬೇಕು ಕಾಳಜಿಯನ್ನು ಹೈಕೋರ್ಟ್ ವ್ಯಕ್ತಪಡಿಸಿದೆ.

ನಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆ‌ರ್ ರದ್ದುಪಡಿಸಬೇಕು ಎಂದು ಕೋರಿ ಧರ್ಮಸ್ಥಳದ ಎಸ್‌.ಡಿ.ಎಂ ಪ್ರೌಢಶಾಲೆ ಶಿಕ್ಷಕರಾದ ರೂಪೇಶ್ (34) ಮತ್ತು ಸದಾನಂದ (44) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸ್ಪಷ್ಟವಾಗಿ ತಿರಸ್ಕರಿಸಿದೆ.ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು, ಘಟನೆಯ ಕುರಿತು ವಿಸ್ತ್ರತ ವಿಚಾರಣೆ ನಡೆಯಬೇಕಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಏನಿದು ಪ್ರಕರಣ?: ಧರ್ಮಸ್ಥಳದ ಎಸ್ ಡಿ ಎಂ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಮೃತ ಬಾಲಕಿ,ಅದೇ ಶಾಲೆಯ ಸಹಪಾಠಿ ಯುವಕನ ಜೊತೆ ಹೆಚ್ಚು ಮಾತನಾಡುತ್ತಿದ್ದರು ಎನ್ನಲಾಗಿದ್ದು, ಇದನ್ನು ಶಿಕ್ಷಕರು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯ ತಾಯಿಯ ಗಮನಕ್ಕೆ ತಂದಿದ್ದರು. ಅಷ್ಟೇ ಅಲ್ಲದೆ ಶಿಕ್ಷಕ ರೂಪೇಶ್ ಇತರೆ ವಿದ್ಯಾರ್ಥಿಗಳಿಗೂ ತಿಳಿಸಿದ್ದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ತಾಯಿ, ನನ್ನ ಮಗಳ ಬಗ್ಗೆ ಏನೇ ಆರೋಪ ಇದ್ದರೂ, ಅದನ್ನು ಇತರೆ ಮಕ್ಕಳ ಮುಂದೆ ಬಹಿರಂಗಪಡಿಸಿ ಅವಮಾನಿಸದೆ ನನ್ನ ಗಮನಕ್ಕೆ ತನ್ನಿ. ಯಾವುದೇ ಕಾರಣಕ್ಕೂ ಮಗಳ ಘನತೆಗೆ ಕಪ್ಪುಚುಕ್ಕೆ ಇಡಬೇಡಿ ಎಂದು ಮನವಿ ಶಿಕ್ಷಕರಿಗೆ ಮಾಡಿದ್ದರು.

ಇದರಿಂದ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಮೃತಪಟ್ಟಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರಕಲಾ ಶಿಕ್ಷಕ ರೂಪೇಶ್ ಮತ್ತು ದೈಹಿಕ ಶಿಕ್ಷಕ ಸದಾನಂದ ಇಬ್ಬರು ಶಿಕ್ಷಕರ ವಿರುದ್ಧ ವಿದ್ಯಾರ್ಥಿನಿ ತಾಯಿ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರು. ಧರ್ಮಸ್ಥಳ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿಯ ವಿವಿದ ಸೆಕ್ಷನ್, ಪೋಕ್ರೋ ಮತ್ತು ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು.


Share It

You cannot copy content of this page